ವೀರನಾರಿ ಕಿತ್ತೂರು ರಾಣಿ ಚನ್ನಮ್ಮ

(ಬ್ರಿಟಿಷರ ವಿರುದ್ಧ ಗೆಲುವಿನ ನೆನಪಿಗಾಗಿ ಪ್ರತಿವರ್ಷ ಅ.23ರಿಂದ 25ರವರೆಗೆ ಆಚರಿಸು ವುದೇ ಕಿತ್ತೂರು ಉತ್ಸವ.)

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬೆಳಗುವ ಹೆಸರುಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮಳದು ಮುಂಚೂಣಿಯಲ್ಲಿದೆ. ಆದರೆ ಅವಳು ಆಳಿದ ನೆಲ ಇಂದು ದುಸ್ಥಿತಿಯಲ್ಲಿದೆ; ಕೋಟೆ ಕುಸಿಯುತ್ತಿದೆ. ಕಿತ್ತೂರಿನ ಸಮಗ್ರ ಇತಿಹಾಸ ಸಾರುವ ಸಾಹಿತ್ಯವೂ ರಚನೆಯಾಗಿಲ್ಲ. ಹೀಗಿರುವಾಗ ಮುಂದಿನ ಪೀಳಿಗೆ ಇತಿಹಾಸದಿಂದ ಪ್ರೇರಣೆ ಪಡೆಯುವುದಾದರೂ ಹೇಗೆ?

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ-1857ರಲ್ಲಿ ನಡೆದದ್ದು- ಇಡೀ ದೇಶಕ್ಕೇ ಗೊತ್ತು. ಆದರೆ, ಅದಕ್ಕೂ 33 ವರ್ಷಗಳ ಮೊದಲೇ ಅಂದರೆ 1824ರಲ್ಲೇ ನಮ್ಮ ನಾಡಿನ ಐತಿಹಾಸಿಕ ನೆಲ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆದಿತ್ತು. ವೀರರಾಣಿ ಚನ್ನಮ್ಮ ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ್ದಳು. ಆದರೆ, ಈ ಭವ್ಯ ಇತಿಹಾಸ ದೇಶವಾಸಿಗಳ ಗಮನಕ್ಕೆ ಅಷ್ಟಾಗಿ ಬಂದಿಲ್ಲವೆನ್ನುವುದು ಖೇದದ ಸಂಗತಿಯೇ ಸರಿ. ಇನ್ನೊಂದೆಡೆ, ಪ್ರತಿವರ್ಷ ರಾಜ್ಯ ಸರ್ಕಾರ ಆಚರಿಸುವ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ರೂಪ ಪಡೆಯುತ್ತಿಲ್ಲ. ಹೋರಾಟದ ಕೆಚ್ಚೆದೆಯನ್ನೇ ಉಸಿರಾಗಿಸಿಕೊಂಡು ಬೆಳೆದ ಊರು ಕಿತ್ತೂರು. ಇದರ ಮೂಲ ಹೆಸರು ಗೀಜಗನಹಳ್ಳಿ. ಈ ಸಣ್ಣ ಊರು ಪ್ರಸಿದ್ಧವಾಗಲು ಕಾರಣ ರಾಣಿ ಚನ್ನಮ್ಮ. ಕಿತ್ತೂರಲ್ಲಿರುವ ಸ್ಮಾರಕಗಳು, ಐತಿಹಾಸಿಕ ಪಳೆಯುಳಿಕೆಗಳು ಹಾಗೂ ವಸ್ತುಗಳು ಒಂದೊಂದೂ ರೋಚಕ ಕಥೆಯನ್ನು ಪಿಸುಗುಡುತ್ತವೆ. ಆದರೆ, ಪ್ರೇರಣಾದಾಯಿಅಧ್ಯಾಯದ ಸ್ಥಳಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಜನರ ಗಮನಕ್ಕೆ ಬರುತ್ತಿಲ್ಲ.

ಕಿತ್ತೂರು ಉತ್ಸವ ಆಚರಣೆ ಏಕೆ?

ಭಾರತವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕೆಂಬ ಕಾರಣಕ್ಕೆ ಬ್ರಿಟಿಷರು ಒಂದೊಂದೇ ಸಂಸ್ಥಾನಗಳ ಮೇಲೆ ದಬ್ಬಾಳಿಕೆ ಹಾಗೂ ಯುದ್ಧ ಮಾಡುತ್ತ ಸಾಗಿದ್ದರು. ಬ್ರಿಟಿಷ್ ಅಧಿಕಾರಿ ಧಾರವಾಡದ ಥ್ಯಾಕರೆ 1824ರ ಅ.23ರಂದು ಕಿತ್ತೂರಿನ ಕೋಟೆಯ ಬಾಗಿಲು ತೆರೆಯಲು ಆಜ್ಞೆ ಮಾಡಿದನು. ಬಾಗಿಲನ್ನು ತೆರೆಯದೆ ಇದ್ದಾಗ ಕೋಟೆಯ ಬಾಗಿಲು ಒಡೆಯುವಂತೆ ಹೇಳಿದನು. ಕೊನೆಗೆ ಯುದ್ಧವನ್ನೂ ಸಾರಿದನು. ಈ ಯುದ್ಧದಲ್ಲಿ ಪತಿ ಮರಣವನ್ನಪ್ಪಿದರೂ ಹೆದರದೆ ಮುನ್ನುಗ್ಗಿದ ಚನ್ನಮ್ಮ ಪರಾಕ್ರಮ ಮೆರೆಯುತ್ತಾಳೆ. ತನ್ನ ಬಲಗೈ ಬಂಟರಾದ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಸೈನ್ಯದೊಂದಿಗೆ ಯುದ್ಧಕ್ಕೆ ಇಳಿಯುತ್ತಾಳೆ. ಮಹಾನವಮಿ ಯಂದು ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಸಾಹೇಬನ ರುಂಡ ಚೆಂಡಾಡಿ ಜಯ ಸಾಧಿಸು ತ್ತಾಳೆ. ಬ್ರಿಟಿಷರ ವಿರುದ್ಧ ಗೆಲುವಿನ ನೆನಪಿಗಾಗಿ ಪ್ರತಿವರ್ಷ ಅ.23ರಿಂದ 25ರವರೆಗೆ ಆಚರಿಸು ವುದೇ ಕಿತ್ತೂರು ಉತ್ಸವ. ಈ ಉತ್ಸವದ ಮೂಲಕ ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸವನ್ನು ಯುವಕರಿಗೆ ಪರಿಚಯಿಸುವ ಸಲುವಾಗಿ 1967ರಲ್ಲಿ ದಿ.ಪ್ರೊ.ವಿ.ಜಿ.ಮಾರಿಹಾಳ ಮಾರ್ಗದರ್ಶನದಲ್ಲಿ ಈರಣ್ಣ ಮಾರಿಹಾಳ ವೀರರಾಣಿ ಚನ್ನಮ್ಮ ಯುವಕ ಸಂಘ ಹುಟ್ಟು ಹಾಕಿದರು. ಸರ್ಕಾರದ ಸಹಾಯಕ್ಕೆ ಕೈಯೊಡ್ಡದೆ ಯುವಕ ಸಂಘಗಳ ದೇಣಿಗೆಯಲ್ಲೇ ಉತ್ಸವ ಆಚರಿಸತೊಡಗಿದರು. 1982 ರಲ್ಲಿ ದಿ.ಚನ್ನಪ್ಪ ಮಾರಿಹಾಳ ಅಧ್ಯಕ್ಷತೆಯಲ್ಲಿ ಚನ್ನಮ್ಮ ವಿಜಯೋತ್ಸವ ಕಮಿಟಿ ರಚಿಸಲಾಯಿತು. ಈ ಕಮಿಟಿ 1996 ರವರೆಗೆ ವಿಜಯೋತ್ಸವ ಆಚರಿಸಿತು. 1997 ರಿಂದ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ.

ಚನ್ನಮ್ಮನ ಖಡ್ಗ ವಾಪಸ್ ಬರುವುದೇ?

ಕಿತ್ತೂರು ರಾಣಿ ಚನ್ನಮ್ಮ ಎಂದಕೂಡಲೇ ಕುದುರೆ ಏರಿ, ಖಡ್ಗ ಝುಳಪಿಸುವ ಚಿತ್ರ ಕಣ್ಮುಂದೆ ಬರುತ್ತದೆ. ಈ ವೀರನಾರಿ ಬ್ರಿಟಿಷರ ರುಂಡ ಚೆಂಡಾಡುವ ವೇಳೆ ಹಿಡಿದ ಖಡ್ಗವನ್ನು ನೋಡುವ ಅವಕಾಶ ನಾಡಿನ ಜನರಿಗೆ ಸಿಕ್ಕಿಲ್ಲ. ಕಿತ್ತೂರು ಸಂಸ್ಥಾನದ ಅರಸರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ ದಾಖಲೆಗಳು ಇಂದಿಗೂ ಲಂಡನ್​ನ ಭಾರತ ಕಚೇರಿಯ ಪತ್ರಾಗಾರ (ಇಂಡಿಯಾ ಆಫೀಸ್, ಲಂಡನ್)ದಲ್ಲಿ ಸುರಕ್ಷಿತವಾಗಿ ಕಾದಿಡಲ್ಪಟ್ಟಿವೆ. ಇವು ಕಿತ್ತೂರಿನ ಇತಿಹಾಸ ಹಾಗೂ 1824ರ ಯುದ್ಧದ ಬಗ್ಗೆ ಉಪಲಬ್ಧವಿರುವ ಮಹತ್ವದ ದಾಖಲೆಯಾಗಿವೆ. ಈಗ ಕಿತ್ತೂರನ್ನು ಪ್ರತಿನಿಧಿಸುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಾಗಿದ್ದು, ವಿದೇಶಾಂಗ ಸಚಿವರೊಂದಿಗೆ ರ್ಚಚಿಸಿ ಖಡ್ಗ ಮತ್ತು ಇತರ ಯುದ್ಧದ ವಸ್ತುಗಳನ್ನು ಮರಳಿ ತಾಯ್ನಾಡಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ? ಈ ಬಾರಿಯ ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ವಿಚಾರವಾಗಿ ನಿರ್ಧಾರ ಪ್ರಕಟಿಸುವರೇ ಎಂಬುದು ಚನ್ನಮ್ಮನ ಅಭಿಮಾನಿಗಳ ಕಾತರವಾಗಿದೆ. ದೇಶಾದ್ಯಂತ ಚನ್ನಮ್ಮ ಜಯಂತ್ಯುತ್ಸವ ಆಚರಿಸುವ ಜತೆಗೆ ಲಂಡನ್​ನಲ್ಲಿರುವ ಕಿತ್ತೂರು ಚನ್ನಮ್ಮನ ಖಡ್ಗವನ್ನು ಬೇಗ ಭಾರತಕ್ಕೆ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಆಗ್ರಹಿಸಿದ್ದಾರೆ.

ಬೆಳಕು ವ್ಯವಸ್ಥೆ ಇಲ್ಲ

ಕಿತ್ತೂರು ಇತಿಹಾಸವನ್ನು ಸಂಗೀತ ಹಾಗೂ ವಿದ್ಯುತ್ ದೀಪಗಳೊಂದಿಗೆ ಪರಿಚಯಿಸುವ ನಿಟ್ಟಿನಲ್ಲಿ ಆರಂಭಿಸಿದ್ದ ಧ್ವನಿ ಮತ್ತು ಬೆಳಕು ಪ್ರದರ್ಶನ ಉತ್ಸವಕ್ಕೆ ಮಾತ್ರ ಸೀಮಿತವಾಗಿದೆ. ಈ ವ್ಯವಸ್ಥೆಗಾಗಿ ಸರ್ಕಾರ 2.80 ಕೋಟಿ ರೂ. ಖರ್ಚು ಮಾಡಿದೆ. ಇನ್ನುಂದೆ ವಾರದಲ್ಲಿ ಎರಡು ಬಾರಿ ಧ್ವನಿ ಮತ್ತು ಬೆಳಕು ಪ್ರದರ್ಶನ ಆಯೋಜಿಸಲಾಗುವುದು ಎಂದು ಕಳೆದ ಬಾರಿ ಉತ್ಸವದ ವೇಳೆ ಜಿಲ್ಲಾಡಳಿತ ನೀಡಿದ್ದ ಭರವಸೆ ಈಡೇರಿಲ್ಲ.

ದುಸ್ಥಿತಿಯಲ್ಲಿ ಕಿತ್ತೂರು ಕೋಟೆ

ಚನ್ನಮ್ಮನ ಇತಿಹಾಸ ಸಾರಬೇಕಿದ್ದ ಕೋಟೆ ಕಳಚಿ ಬೀಳುತ್ತಿದೆ. ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿ ರಾಣಿ ಚನ್ನಮ್ಮ ಮತ್ತು ಬೆನ್ನಿಗೆ ನಿಂತ ವೀರಕಲಿಗಳ ಸ್ಮಾರಕಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಇಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಕೋಟೆಯಲ್ಲಿರುವ ದರ್ಬಾರ್ ಹಾಲ್, ಮದ್ದುಗುಂಡುಗಳ ಸಂಗ್ರಹಾಗಾರ, ಬತೇರಿ, ಅರಮನೆಯ ಮುಖ್ಯದ್ವಾರ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಬಾವಿಗಳು, ಸ್ನಾನದ ಮನೆಗಳು ಮುಂತಾದವು ಅವಸಾನದಂಚಿಗೆ ತಲುಪಿವೆ.

ಚನ್ನಮ್ಮನ ಇತಿಹಾಸ

1585-1824ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನ ಆಳಿದ ಪ್ರಮುಖ 12 ದೇಸಾಯರಲ್ಲಿ ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ಚನ್ನಮ್ಮ ಒಬ್ಬಳು. ಬ್ರಿಟಿಷರದ್ದು ಒಡೆದು ಆಳುವ ನೀತಿ. ಈ ಕುತಂತ್ರಕ್ಕೆ ಟಿಪ್ಪು ಹಾಗೂ ಪೇಶ್ವೆಯಂಥ ರಾಜರು ಬಲಿಯಾಗಿದ್ದರು. ಇದು ದೇಶಾಭಿಮಾನಿ ಮಲ್ಲಸರ್ಜನ ಕಳವಳಕ್ಕೆ ಕಾರಣವಾಗಿತ್ತು. ಹಾಗಾಗಿ, ಕೊಲ್ಲಾಪುರದ ದೇಸಾಯರು ಒಳಗೊಂಡಂತೆ ದಕ್ಷಿಣದ ದೇಸಾಯರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಊರೂರು ಅಲೆದ. ಒಮ್ಮೆ ಕಾಕತಿಗೂ ಬಂದ. ಕಾಕತಿಯಲ್ಲಿ ಹುಲಿಬೇಟೆ ಸಂದರ್ಭ ಮಲ್ಲಸರ್ಜನೊಂದಿಗೆ ಚನ್ನಮ್ಮನ ಭೇಟಿಯಾಯಿತು. ನಂತರ ಇಬ್ಬರ ವಿವಾಹವಾಯಿತು ಎಂದು ಲೇಖಕ ಯ.ರು.ಪಾಟೀಲ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ.

ಟಿಪ್ಪು ಸುಲ್ತಾನನ ಸಮಕಾಲೀನ ಮಲ್ಲಸರ್ಜನು 1782 ರಲ್ಲಿ ಸಿಂಹಾಸನವೇರಿದ. ಆತ ಸಾಹಸಿ ಮತ್ತು ಸಮರ್ಥ ಆಡಳಿತಗಾರನಾಗಿದ್ದ. ದೇಸಾಯಿಣಿ ಚನ್ನಮ್ಮನೊಂದಿಗೆ ಸುಖದಿಂದ ರಾಜ್ಯವಾಳಿ 1816ರಲ್ಲಿ ತೀರಿಕೊಂಡ. ಆಗ ಹಿರಿಯ ದೇಸಾಯಿಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಆಡಳಿತ ನೀಡಲಾಯಿತು. ಆದರೆ, ರೋಗ ಪೀಡಿತನಾದ ಈತನೂ ಮೃತಪಟ್ಟ. ಆಗ ದತ್ತಕ ತೆಗೆದುಕೊಳ್ಳಲು ಹೊರಟಾಗ ಬ್ರಿಟಿಷ್ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಈ ಕುಂಟುನೆಪದೊಂದಿಗೆ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ಅಧೀನಪಡಿಸಿಕೊಳ್ಳುವ ಹೊಂಚು ಹಾಕಿದರು. ಇದನ್ನು ರಾಣಿ ಚನ್ನಮ್ಮ ವಿರೋಧಿಸಿದಳು.

ಶಿವಲಿಂಗಸರ್ಜನ ಮರಣದ ನಂತರ ಆಗಿನ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ರಾಜಭಂಡಾರಕ್ಕೆ ಬೀಗ ಹಾಕಿ ತನ್ನ ಅಧಿಕಾರಿಗಳನ್ನು ನೇಮಕ ಮಾಡಿದ. ಈ ಕ್ರಮ ಚನ್ನಮ್ಮನಿಗೆ ಸರಿ ಅನಿಸದೆ ಥ್ಯಾಕರೆ ವಿರುದ್ಧ ಯುದ್ಧ ಸಾರಿದಳು. ಆದರೆ, ಸಂಧಾನ ಬಾಗಿಲು ತೆರೆದಿತ್ತು. ಮಾತುಕತೆ ನೆಪದಲ್ಲಿ ಥ್ಯಾಕರೆ ಹೊರಬಂದ. ಆಗ ಕಿತ್ತೂರ ಕೋಟೆ ಬಾಗಿಲು ಮುಚ್ಚಿತು. ಬಾಗಿಲು ತೆರೆಯಲು ನೀಡಿದ ಆದೇಶ ವಿಫಲವಾಯಿತು. ಆಗ ಚನ್ನಮ್ಮನ ಆದೇಶದಂತೆ ಅಮಟೂರ ಬಾಳಪ್ಪ ಗುಂಡುಹಾರಿಸಿದ್ದೇ ತಡ, ಥ್ಯಾಕರೆ ಹೆಣ ಕೆಳಗೆ ಬಿತ್ತು. ನಂತರ ನಡೆದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ಜಯ ಸಾಧಿಸಿತು. ಆದರೆ 2ನೇ ಯುದ್ಧದಲ್ಲಿ ಚನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಯಾಗಿ 1829 ಫೆ.2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ದೇಹತ್ಯಾಗ ಮಾಡುತ್ತಾಳೆ.

ಹೆಸರಿಗಷ್ಟೇ ಅಭಿವೃದ್ಧಿ ಪ್ರಾಧಿಕಾರ

ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸ್ಥಳಗಳ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿತ್ತು. ಆಗ ಪ್ರಾಧಿಕಾರದಿಂದ ಸಣ್ಣಪುಟ್ಟ ಕೆಲಸಗಳೂ ನಡೆದಿದ್ದವು. ಆದರೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಧಿಕಾರದ ಅಧ್ಯಕ್ಷರಾದ ಮೇಲೆ ಹೇಳಿಕೊಳ್ಳುವಂಥ ಯಾವ ಅಭಿವೃದ್ಧಿ ಕೆಲಸವೂ ನಡೆದಿಲ್ಲ. ಇತಿಹಾಸವನ್ನು ಸಮಗ್ರವಾಗಿ ಅಭ್ಯಸಿಸದವರು ಹಾಗೂ ರಾಜಕೀಯ ವ್ಯಕ್ತಿಗಳೇ ಪ್ರಾಧಿಕಾರದ ಸದಸ್ಯರಾಗಿದ್ದರಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಕೇವಲ ಮಹಾದ್ವಾರಗಳ ನಿರ್ವಣಕ್ಕೆ ಮಾತ್ರ ಪ್ರಾಧಿಕಾರದ ಕೆಲಸ ಸೀಮಿತವಾಗಿದೆ ಎಂದು ಚನ್ನಮ್ಮ ಅಭಿಮಾನಿಗಳು ಆರೋಪಿಸುತ್ತಾರೆ.

ಪ್ರವಾಸಿತಾಣವಾಗುವುದೆಂದು?: ಐತಿಹಾಸಿಕ ಕಿತ್ತೂರನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕೆಂಬುದು ಇಲ್ಲಿನ ಜನರ ದಶಕಗಳ ಬೇಡಿಕೆ. ಸರ್ಕಾರವೂ ಪ್ರತಿವರ್ಷ ಪ್ರವಾಸೋದ್ಯಮಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತ ಬಂದಿದೆ. ಆದರೆ, ಅವ್ಯಾವವೂ ಅನುಷ್ಠಾನಗೊಂಡಿಲ್ಲ. ಕಿತ್ತೂರು ಉತ್ಸವ ನಡೆಯುವ ಅಕ್ಟೋಬರ್ ತಿಂಗಳು ಬಿಟ್ಟರೆ, ಪ್ರವಾಸಿಗರು ಇತ್ತ ಸುಳಿಯುವುದು ಕಡಿಮೆ. ಇಷ್ಟಾಗಿಯೂ ಕಿತ್ತೂರು ಕೋಟೆ ನೋಡಲು ಬಂದವರಿಗೆ ನಿರಾಸೆಯೇ ಹೆಚ್ಚು.

ಹೊರಬಾರದ ಸಮಗ್ರ ಸಾಹಿತ್ಯ: ಕಿತ್ತೂರು ಸಂಸ್ಥಾನದ ಸಮಗ್ರ ವಿವರ ಇನ್ನೂ ಲಭ್ಯವಿಲ್ಲ. ಮಹಾರಾಷ್ಟ್ರದ ಪುಣೆ ಹಾಗೂ ಲಂಡನ್​ನಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದು ಹಲವರು ಹೇಳುತ್ತಾರೆ. ಆದರೆ, ಅವುಗಳನ್ನು ತಂದು ಕ್ರೋಡೀಕರಿಸುವ ಕೆಲಸ ಆಗಿಯೇ ಇಲ್ಲ. ‘ಈ ದಾಖಲೆಗಳನ್ನೆಲ್ಲ ತಂದರೆ ಕಿತ್ತೂರು ಸಂಸ್ಥಾನದ ಬಗ್ಗೆ ಆಳವಾಗಿ ಅಭ್ಯಸಿಸಲು ಸಹಾಯಕವಾಗುತ್ತದೆ‘ ಎಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳುತ್ತಾರೆ. ಬೆಳಗಾವಿ ಸಮೀಪದ ಭೂತರಾಮನಹಟ್ಟಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವಿದೆ. ಅಲ್ಲಿ ಚನ್ನಮ್ಮನ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪಿಸಿ ವಿದ್ಯಾರ್ಥಿಗಳಿಂದ ಇತಿಹಾಸ ಸಾರುವ ಸಂಶೋಧನೆ ಹಾಗೂ ಎಂ.ಫಿಲ್ ಕೈಗೊಳ್ಳಲು ರಾಜ್ಯ ಸರ್ಕಾರವು ಪ್ರೇರಣೆ ತುಂಬಬೇಕು ಎನ್ನುತ್ತಾರೆ ರಾಜಯೋಗೀಂದ್ರ ಸ್ವಾಮೀಜಿ.

ಬೈಲಹೊಂಗಲದಲ್ಲಿ ಸಮಾಧಿ: ಬೈಲಹೊಂಗಲದಲ್ಲಿ ಚನ್ನಮ್ಮನನ್ನು ಸಮಾಧಿ ಮಾಡಲಾಗಿದೆ. ಈ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕೆಂಬುದು ಇಲ್ಲಿನ ಜನರ ದಶಕಗಳ ಬೇಡಿಕೆ. ಆದರೆ, ಸಣ್ಣ-ಪುಟ್ಟ ಕಾಮಗಾರಿಗಳು ನಡೆದಿದ್ದು ಬಿಟ್ಟರೆ, ರಾಷ್ಟ್ರೀಕ ಸ್ಮಾರಕವಾಗಿ ರೂಪುಗೊಳ್ಳುವ ಲಕ್ಷಣಗಳು ಅಲ್ಲಿ ಗೋಚರಿಸುತ್ತಿಲ್ಲ. ಕಿತ್ತೂರು ಚನ್ನಮ್ಮನ ಜನ್ಮಸ್ಥಳ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ. ಅಲ್ಲಿ ಚನ್ನಮ್ಮ ಜನ್ಮತಳೆದ ಮನೆ ಕುಸಿದು ಬಿದ್ದಿದ್ದು, ಐತಿಹಾಸಿಕ ಕಾಕತಿ ಕೋಟೆಯೂ ಬೀಳುತ್ತ ಸಾಗಿದೆ. ಕೋಟೆ ಅಭಿವೃದ್ಧಿ ಆಗಬೇಕು ಮತ್ತು ಚನ್ನಮ್ಮ ವಾಸಿಸುತ್ತಿದ್ದ ಮನೆಯನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬೇಕೆಂಬ ಬೇಡಿಕೆಯಿದೆ.

ಸರ್ಕಾರ ಕಿತ್ತೂರು ಚನ್ನಮ್ಮನ ಇತಿಹಾಸದ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ಕಿತ್ತೂರನ್ನು ಐತಿಹಾಸಿಕ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಈ ಕೆಲಸ ಆಗಬೇಕಿದೆ.

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಲ್ಮಠ ಕಿತ್ತೂರು

ಉತ್ಸವ-ಜಯಂತಿ ಗೊಂದಲ

ಕಿತ್ತೂರು ಸಂಸ್ಥಾನ ಬ್ರಿಟಿಷರನ್ನು ಸದೆಬಡಿದ ನೆನಪಿಗಾಗಿ ಕಿತ್ತೂರಲ್ಲಿ ಕಳೆದೆರಡು ದಶಕಗಳಿಂದ ಸರ್ಕಾರ ಅ.23ರಿಂದ 25ರವರೆಗೆ ವಿಜಯೋತ್ಸವ ಆಚರಿಸುತ್ತ ಬಂದಿದೆ. ಚನ್ನಮ್ಮನ ಜನ್ಮದಿನ ಎಂದು ಹೇಳಲಾಗುವ ನ.14ರಂದು ಕಿತ್ತೂರಿನ ಕಲ್ಮಠದಲ್ಲೇ ಚನ್ನಮ್ಮನ ಜಯಂತಿಯನ್ನು ಆಯೋಜಿಸಲಾಗುತ್ತದೆ. ಈ ಮಧ್ಯೆ ಸರ್ಕಾರ ದಿಢೀರೆಂದು 23ರಂದು ನಡೆಯುವ ಉತ್ಸವದಲ್ಲೇ ಚನ್ನಮ್ಮ ಜಯಂತಿ ಆಚರಣೆಗೂ ಮುಂದಾಗಿದ್ದುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಸರ್ಕಾರ ಜಯಂತಿ ಆಚರಣೆಯಿಂದ ಹಿಂದೆ ಸರಿದಿದೆ.

23 ಎಕರೆ ಪ್ರದೇಶ

ಚನ್ನಮ್ಮನ ಇತಿಹಾಸ ಸಾರುವ ಕಿತ್ತೂರು ಕೋಟೆಯು ಒಟ್ಟು 23 ಎಕರೆ ಪ್ರದೇಶದಲ್ಲಿ ನಿರ್ವಣಗೊಂಡಿದೆ. ಇಲ್ಲಿ ಐತಿಹಾಸಿಕ ಕುರುಹುಗಳ ಜತೆಗೆ, ವಸ್ತು ಸಂಗ್ರಹಾಲಯವೂ ಇದೆ. ಸಂಗ್ರಹಾಲಯದಲ್ಲಿ ಹಲವು ಮಹತ್ವದ ಶಾಸನಗಳು, ವೀರಗಲ್ಲುಗಳು, ಬ್ರಿಟಿಷರ ವಿರುದ್ಧದ ಯುದ್ಧದ ವೇಳೆ ಸೈನಿಕರು ಬಳಸಿದ್ದ ಸಾಮಗ್ರಿಗಳು, ಆ ವೇಳೆ ಧರಿಸಿದ್ದ ಸಮವಸ್ತ್ರಗಳು ಇವೆ. ಪ್ರವಾಸಿಗರು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ.

ಕಲ್ಮಠದಿಂದ ಮಾರ್ಗದರ್ಶನ

ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮನಿಗೆ ಕಿತ್ತೂರು ರಾಜಸಂಸ್ಥಾನ ಕಲ್ಮಠ ಮಾರ್ಗದರ್ಶನ ಮಾಡುತ್ತ ಬಂದಿತ್ತು. ಅಲ್ಲದೆ ಧಾರ್ವಿುಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಯುದ್ಧತಂತ್ರಗಳ ಬಗ್ಗೆ ತಿಳಿವಳಿಕೆ ನೀಡುತ್ತಿತ್ತು ಎಂದು ಪೂರ್ವಜರು ಹೇಳುತ್ತಾರೆ. ಕಿತ್ತೂರು ಅರಸರಿಗೆ ಮಾರ್ಗದರ್ಶನ ನೀಡಿದ್ದ ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿರುವ ರಾಜರ ಸಮಾಧಿಗಳು ಮತ್ತು ಚೌಕಿ ಮಠದಲ್ಲಿರುವ ರಾಜಗುರುಗಳ ಸಮಾಧಿಗಳು ಅವಸಾನದಂಚಿಗೆ ತಲುಪಿವೆ.

ಅರಮನೀ ಕಟ್ಟಬೇಕ್ರೀ

ಕಿತ್ತೂರು ಉತ್ಸವ ಇದ್ದಾಗ ಅಧಿಕಾರಿಗೋಳ್ ತಡಬಾಯಿಸಿ ಇಲ್ಲಿಗೇ ಬರ್ತಾರು. ಮತ್ತ ಇತ್ತ ಸುಳಿಯೂದ್ ಇಲ್ಲ. ಕಾಟಾಚಾರಕ್ಕ ಚನ್ನಮ್ಮನ ಉತ್ಸವ ಮಾಡಾಕತ್ತಾರು. ಚನ್ನಮ್ಮ ವಾಸಿಸುತ್ತಿದ್ದ ಮನೆ ಬಿದ್ದಿದ್ದು, ಅಲ್ಲಿನ ಜಾಗವನ್ನ ಸರ್ಕಾರ ವಶಕ್ಕ ಪಡದ ಅಲ್ಲಿ ಅರಮನೀ ಕಟ್ಟಬೇಕ್ರೀ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಹಿಂದಿನ ಸಿಎಂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಗೂ ಮನವಿ ಸಲ್ಲಿಸಿದ್ದೇವೆ ಎಂದು ಕಾಕತಿ ಗ್ರಾಮದಲ್ಲಿರುವ ಚನ್ನಮ್ಮನ ವಂಶಸ್ಥ ಬಾಬಾಸಾಹೇಬ ದೇಸಾಯಿ ಹೇಳುತ್ತಾರೆ.

 

ಹೀಗಿದೆ ಕಾಕತಿ ಗ್ರಾಮ

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ ಜಿಲ್ಲಾಕೇಂದ್ರದಿಂದ ಎಂಟು ಕಿಮೀ ದೂರದಲ್ಲಿದೆ. ಇಲ್ಲಿ ಚನ್ನಮ್ಮನ ವಂಶದ 6ನೇ ತಲೆಮಾರಿನ ಮೂರು ಕುಟುಂಬಗಳು ವಾಸಿಸುತ್ತಿವೆ. ಚನ್ನಮ್ಮ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದ ಮನೆ ಕುಸಿದಿದೆ. 1 ಎಕರೆ, 10 ಗುಂಟೆ ಖಾಲಿ ಜಾಗ ಮಾತ್ರವಿದೆ. ಈ ಜಾಗವನ್ನು ರಾಜ್ಯ ಸರ್ಕಾರ ಕುಟುಂಬಸ್ಥರಿಗೆ ಹಣ ನೀಡಿ ಖರೀದಿಸಿ, ಅಲ್ಲಿ ಮ್ಯೂಸಿಯಂ ಹಾಗೂ ಬಾಲಕಿಯರ ವಸತಿ ನಿಲಯ ನಿರ್ವಿುಸಬೇಕೆಂದು ಹಲವು ಸಲ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಬೇಡಿಕೆ ಈಡೇರಿಲ್ಲ. ಕಾಕತಿ ಗ್ರಾಮದಿಂದ ಮೇಲ್ಭಾಗದಲ್ಲಿರುವ ಶೇ. 75 ಕೋಟೆಯ ಅವಶೇಷಗಳು ಬೀಳುತ್ತಿದ್ದರೂ, ಸರ್ಕಾರ ಗಮನಹರಿಸುತ್ತಿಲ್ಲವೆಂದು ಕಾಕತಿ ಗ್ರಾಮದ ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ಡಿ.ಪಾಟೀಲ ಹೇಳಿದ್ದಾರೆ.

{Courtesy: ವಿಜಯವಾಣಿ; (Sunday, 22.10.2017)}

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s